Archana Acharya

Archana Acharya

ಎಂಟು ವರ್ಷದ ಹಿಂದೆ ಬೃಂದಾವನ ಕನ್ನಡ ಶಾಲೆಗಳ ಜೊತೆಗೆ ಶುರುವಾದ ನನ್ನ ಹಾಗೂ ಬೃಂದಾವನದ ನಂಟು, ಈ ಕುಟುಂಬದ ಎಲ್ಲರ ಜೊತೆ ಇಂದಿಗೂ ಮುಂದುವರೆದಿದೆ. ನನ್ನಂತೆಯೇ ಹಲವರು, ನಮ್ಮೀ ಬೃಂದಾವನದಲ್ಲಿ ಹೊಸ ಹೊಸ ಸಂಬಂಧಗಳನ್ನು ಬೆಳೆಸುತ್ತಾ ಬಂದಿದ್ದಾರೆ . ಮಕ್ಕಳು, ಶಾಲೆಯ ಇನ್ನಿತರ ಮಕ್ಕಳ ಜೊತೆ; ದೊಡ್ಡವರು-ದೊಡ್ಡವರೊಟ್ಟಿಗೆ; ಹೀಗೇ ಮುಂದುವರೆದ ಸುಮಧುರ ಸ್ನೇಹ ಸಮ್ಮಿಲನ, ನಮ್ಮೀ ಬೃಂದಾವನವನ್ನು ಇನ್ನೂ ಸುಂದರವಾದ ಹೂತೋಟವನ್ನಾಗಿ ಮಾಡಿದೆ. ಇದನ್ನು ಬೆಳೆಸುವ ಅಪೂರ್ವ ಅವಕಾಶ ಹಾಗೂ ಜವಾಬ್ದಾರಿ ನಮ್ಮ-ನಿಮ್ಮೆಲ್ಲರದ್ದು.

2023-24 ರ ಅವಧಿಯಲ್ಲಿ, ನಮ್ಮ ಕನ್ನಡದವರಿಗಾಗಿ, ಮುಖ್ಯ ವೇದಿಕೆಯಲ್ಲಿ, ಉತ್ತಮ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ, ಕರ್ನಾಟಕದಿಂದಲ್ಲದೆ, ಸ್ಥಳೀಯ ಕಲಾವಿದರಿಗೂ ಹೆಚ್ಚಿನ ಅವಕಾಶವನ್ನು ನೀಡುವ ನಿಟ್ಟಿನಲ್ಲಿ, ಕ್ರೀಡೆ, ಮಹಿಳಾ ವೇದಿಕೆ, ಹಾಗೂ ಇನ್ನೂ ವಿವಿಧ ಯೋಜನೆಗಳನ್ನು ನಮ್ಮ ತಂಡವು ಹಮ್ಮಿಕೊಂಡಿದೆ. ನ್ಯೂ ಜೆರ್ಸಿಯಲ್ಲಿಯೇ ಇರುವ, ಕ್ಷೇತ್ರಾನುಭವಿ ತಜ್ಞರನ್ನು ಗುರುತಿಸಿ, ಗೌರವಿಸಿ, ಅವರ ಮಾರ್ಗದರ್ಶನದಲ್ಲಿ ನಮ್ಮ ಬೃಂದಾವನದ ಸದಸ್ಯರು, ವೈಯಕ್ತಿಕ ಬೆಳವಣಿಗೆಯ ಜೊತೆಗೆ, ಬೃಂದಾವನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಡುವ ಗುರಿಯನ್ನಿಟ್ಟುಕೊಂಡಿದ್ದೇವೆ.
ಇಂದಿನ ಬೃಂದಾವನದ ಮಕ್ಕಳು ಬೃಂದಾವನವನ್ನು ಮುಂದುವರೆಸುವವರು. ಅವರಲ್ಲಿ ಕನ್ನಡ ಭಾಷೆ, ಸಂಸ್ಕೃತಿಯ ಮೇಲೆ ಪ್ರೇಮಾಸಕ್ತಿ ಬೆಳೆಸಿ, ವಿವಿಧ ವಿಷಯಾಧಾರಿತ ಚಟುವಟಿಕೆಗಳನ್ನು ಕನ್ನಡ ಶಾಲೆಯ ಮಕ್ಕಳಿಂದಲೇ ಮಾಡಿಸಬೇಕೆಂಬ ಯೋಜನೆಗಳೂ ಮುಂದುವೆರೆಯುತ್ತಿವೆ.
ಕಳೆದ ವರ್ಷ PVSA ಪ್ರಶಸ್ತಿ ಪುರಸ್ಕೃತರಾದ ಯುವ ಬೃಂದಾವನದ ಸದಸ್ಯರ ಚಟುವಟಿಕೆಗಳು ನಿಜಕ್ಕೂ ಶ್ಲಾಘನೀಯ. ಈ ಸ್ವಯಂಪ್ರೇರಿತ ಚಟುವಟಿಕೆಗಳಿಗಾಗಿ, ಇನ್ನಷ್ಟು ಅವಕಾಶಗಳನ್ನು ಕಲ್ಪಿಸಿಕೊಡುವ ಪ್ರಯತ್ನ ನಿರಂತರವಾಗಿ ನಡೆಯುವುದು. ಈವರೆಗೂ ನಡೆಸಿಕೊಂಡು ಬರುತ್ತಿರುವ ವಸಂತೋತ್ಸವ, ವನವಿಹಾರ, ಗಣೇಶೋತ್ಸವ, ಕನ್ನಡ ರಾಜ್ಯೋತ್ಸವ, ಮಕ್ಕಳೋತ್ಸವವನ್ನು ಮುಂದುವರಿಸಿಕೊಂಡು ಹೋಗುವುದರ ಜೊತೆಗೆ, ಸಾಹಿತ್ಯ, ಆರೋಗ್ಯ, ವಾಣಿಜ್ಯ (small business)ಗಳಿಗೆ ಸಂಬಂಧಿತ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವ ಯೋಜನೆ ಇಟ್ಟುಕೊಂಡಿದ್ದೇವೆ.

ನಿಮ್ಮೆಲರ ವಾರ್ಷಿಕ, ದ್ವೈ-ವಾರ್ಷಿಕ ಸದಸ್ಯತ್ವ, ನಮ್ಮೀ ಬೃಂದಾವನದ ಆಗು-ಹೋಗುಗಳಿಗೆ ನೆರವಾಗುವುದು. ಬೃಂದಾವನದ ಹಾಲಿ ಸದಸ್ಯರು ದಯವಿಟ್ಟು ನಿಮ್ಮ ನಿಮ್ಮ ಸದಸ್ಯತ್ವವನ್ನು ಪುನರ್ ನೋಂದಾಯಿಸಿಕೊಳ್ಳಿ.  ಸಾಧ್ಯವಾದಲ್ಲಿ ಆಜೀವ (ಪೇಟ್ರನ್) ಸದಸ್ಯರಾಗಲು ಪರಿಗಣಿಸಿ. ನಿಮ್ಮ ಬಂಧು ಬಾಂಧವರನ್ನು, ಬೃಂದಾವನದ ಬಂಧು ಬಾಂಧವರನ್ನಾಗಲು ಉತ್ತೇಜಿಸಿ ಎಂದು ನಾನು ನಿಮ್ಮೆಲ್ಲರನ್ನೂ ಕಳಕಳಿಯಿಂದ ವಿನಂತಿಸುತ್ತೇನೆ. ಮುಂದಿನ ಎರಡು ವರುಷಗಳ ಅವಧಿಯಲ್ಲಿ ಮತ್ತಷ್ಟೂ ಉತ್ತಮ ಕಾರ್ಯಕ್ರಮಗಳನ್ನು ನೀಡಲು ಈಗಾಗಲೇ ರೂಪುರೇಷೆಗಳನ್ನು ಹಾಕಿಕೊಂಡಿದ್ದೇವೆ.

ನಮ್ಮ ಬೃಂದಾವನದ ಹೂದೋಟದಲ್ಲಿ, ವಸಂತಕಾಲದ ಸೌರಭ ಸ್ಪೂರ್ತಿಯ ಜೊತೆ, ನಿಮ್ಮೆಲ್ಲರ ಮೈತ್ರಿಯಿಂದ ಪ್ರಸನ್ನರಾದ ಅಭಿಮಾನಿಗಳ ಸಮ್ಮಿಲನದ ಸಂಭ್ರಮದಲ್ಲಿ, ಬೃಂದಾವನದ ಪ್ರಗತಿಯನ್ನು ಮುಂದುವರೆಸಲು ನಮ್ಮೆಲ್ಲರಿಗೂ ಅಪೂರ್ವ ಅವಕಾಶವನ್ನು ನೀಡಿರುವ ನಿಮ್ಮಲ್ಲರಿಗೂ ತುಂಬುಹೃದಯದ ಧನ್ಯವಾದಗಳು. ನಿಮ್ಮ ಸುಮಧುರ ಸ್ನೇಹ, ಪ್ರೋತ್ಸಾಹ ಸದಾ ನಿಮ್ಮ ಅಪೂರ್ವ ತಂಡದ ಮೇಲಿರಲಿ ಎಂದು ಆಶಿಸುತ್ತಾ,

ಅರ್ಚನಾ ಆಚಾರ್ಯ,
ಅಧ್ಯಕ್ಷೆ, ಅಪೂರ್ವ ತಂಡ,
ಬೃಂದಾವನ ನ್ಯೂ ಜೆರ್ಸಿ