ಅಧ್ಯಕ್ಷರ ಸಂದೇಶ

ಉಷಾ ಪ್ರಸನ್ನಕುಮಾರ್

ನಿನ್ನೆ ಮೊನ್ನೆಯಷ್ಟೇ ಇನ್ನೂ ಕನಸೊಂದಕ್ಕೆ ಕಾವು ಕೊಡುತ್ತಾ ಇದ್ದವರು ನಾವು. ನ್ಯೂಜೆರ್ಸಿಯಲ್ಲಿ ನಮ್ಮದೇ ಆದ ಒಂದು ಕನ್ನಡ ಸಾಂಸ್ಕೃತಿಕ ಸಂಘವನ್ನು ಕಟ್ಟಬೇಕು ಎಂದು. ಇವತ್ತು ನೋಡಿದರೆ ನಮ್ಮೀ ‘ಬೃಂದಾವನ’ಕ್ಕೆ ಹತ್ತು ತುಂಬಿದ ಹೊತ್ತು! ದಶಮಾನೋತ್ಸವ ಸಂಭ್ರಮ! ಇಂಥದೊಂದು ಪ್ರಮುಖ ಘಟ್ಟಕ್ಕೆ ನಾನೂ ಸಾಕ್ಷಿಯಾಗುತ್ತೇನೆ, ನಾನೂ ಭಾಗವಹಿಸಿ ಸಂತೋಷಿಸುತ್ತೇನೆ ಎಂದು ಊಹಿಸಲೂ ಇರಲಿಲ್ಲ.

೨೦೧೩ರಲ್ಲಿ ನಾವು ಏಳು ಮಂದಿ ಚುನಾಯಿತರಾದೆವು. ‘ಮೈತ್ರಿ’ ತಂಡದವರಿಂದ ಜವಾಬ್ದಾರಿಯನ್ನು ನಮ್ಮ ಹೆಗಲಿಗೇರಿಸಿಕೊಂಡೆವು. ಆಮೇಲೆ ಮತ್ತೂ ಮೂರು ಜನ ಉತ್ಸಾಹಿಗಳು, ನಿಸ್ವಾರ್ಥಮನಸ್ಸಿನ ಸ್ವಯಂಸೇವಾ ಪ್ರವೃತ್ತಿಯವರು ನಮ್ಮ ಕೈಜೋಡಿಸಿದರು. ನಮ್ಮ ತಂಡದಲ್ಲಿ ಹತ್ತು ಜನರಾದೆವು. ನಮ್ಮ ತಂಡದ ಮೊತ್ತಮೊದಲ ಸಭೆಯಲ್ಲಿ, ಈ ವಿಶಿಷ್ಟವಾದ ತಂಡಕ್ಕೆ ಹೆಸರೇನಾಗಬಹುದು ಎಂಬ ಚರ್ಚೆ ನಡೆದಾಗ ಅತ್ಯಂತ ಸೂಕ್ತವಾಗಿ ಕಂಡುಬಂದದ್ದು ‘ಸಂಭ್ರಮ’ ಎಂದು. ಅಲ್ಲದೇ, ಬೃಂದಾವನ ಕನ್ನಡಕೂಟದ ದಶಮಾನೋತ್ಸವ ಸಮಾರಂಭವನ್ನು ಅತ್ಯಂತ ಉತ್ಸಾಹದಿಂದ, ಅಚ್ಚುಕಟ್ಟಾಗಿ, ಅವಿಸ್ಮರಣೀಯವಾಗುವಂತೆ ಹಮ್ಮಿಕೊಳ್ಳಬೇಕು ಎಂದು ನಾವು ಅದಾಗಲೇ ನಿರ್ಧರಿಸಿ ಆಗಿತ್ತು. ಹಾಗಾಗಿ ‘ಸಂಭ್ರಮ’ ಹೆಸರೇ ನಮಗೆ ಸೂಕ್ತವೆನಿಸಿತು.

ಈ ಹಿಂದೆ ‘ಸ್ಫೂರ್ತಿ’ ತಂಡದಲ್ಲಿ ಇದ್ದು ನಾನು ಬೃಂದಾವನಕ್ಕೆ ನನ್ನಿಂದಾದಷ್ಟು ಕೆಲಸ ಮಾಡಿದ್ದೆ; ಅನುಭವ ಪಡೆದಿದ್ದೆ. ಆದರೂ ಇದೀಗ ಎರಡನೇ ಬಾರಿಗೆ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿರುವುದು ತುಸು ಭಾರವೇ ಆಗಬಹುದೇನೋ ಅಂದುಕೊಂಡಿದ್ದೆ. ಆದರೆ ನನ್ನ ತಂಡದ ಸಹಸದಸ್ಯರ ಉತ್ಸಾಹವನ್ನು ನೋಡಿದೆ. ಒಳ್ಳೆಯ ಕಾರ್ಯಕ್ರಮಗಳನ್ನು ಕೊಡಬೇಕು, ಅಗತ್ಯವಿದ್ದವರಿಗೆ ಅನುಕೂಲವಾಗುವಂತೆ ದತ್ತಿನಿಧಿಸಂಗ್ರಹಣೆ ಮಾಡಬೇಕು, ಚಿಕ್ಕ ಮಕ್ಕಳು ಮತ್ತು ಹಿರಿಯರನ್ನೂ ಸೇರಿಸಿಕೊಂಡು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂಬೆಲ್ಲ ಅವರುಗಳಲ್ಲಿದ್ದ ಯೋಜನೆಗಳನ್ನು ಕಂಡೆ. ನನ್ನ ಬಲ ಇಮ್ಮಡಿಯಾಯಿತು! 

 

ಸಂಭ್ರಮ ತಂಡ / Sambrama Team -  2013-14

 

ಸಂಭ್ರಮ ತಂಡವು ಕರ್ನಾಟಕದಿಂದ ಬಂದ ಹಲವಾರು ಪ್ರಖ್ಯಾತ ಕಲಾವಿದರ ಕಾರ್ಯಕ್ರಮಗಳನ್ನು ಬೃಂದಾವನ ಕನ್ನಡಕೂಟದ ಆಶ್ರಯದಲ್ಲಿ ನಡೆಸುವ ಸದವಕಾಶವನ್ನು ಪಡೆಯಿತು. ಸುಂದರ್ ಮತ್ತು ವೀಣಾ ಅವರು ಅಭಿನಯಿಸಿದ ಕೈಲಾಸಂ ಸಾರ’, ಎಂ.ಎಸ್.ನರಸಿಂಹ ಮೂರ್ತಿಯವರ ಹಾಸ್ಯಭಾಷಣ, ಸಂಗೀತಾ ಕಟ್ಟಿಯವರ ಗಾಯನ, ಎಂ.ಡಿ.ಕೌಶಿಕ್ ಅವರ ಜಾದೂಪ್ರದರ್ಶನ, ಬೆಂಗಳೂರಿನ ಕಾಸ್ಮೋಸ್ ಆತ್ಮ ತಂಡದ ದೇಸೀ ಬೀಟ್ಸ್, ಡಾ.ಮುಖ್ಯಮಂತ್ರಿ ಚಂದ್ರು ಅವರಿಂದ ಕನ್ನಡಕಲಿ ಕುರಿತ ಉಪನ್ಯಾಸ, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರಿಂದ ರಸಮಂಜರಿ, ಕಾಸ್ಮೋಸ್ ಆತ್ಮ ಜ್ಯೂನಿಯರ್ ಬ್ಯಾಂಡ್‌ನ ಸಂಗೀತವೈವಿಧ್ಯ, ವಿನಯ್ ಹೆಗಡೆಯವರಿಂದ ಗ್ಲೋ ಆರ್ಟ್ ಎಂಬ ಬೆಳಕಿನ ಚಿತ್ತಾರ, ಖಾನ್ ಸಹೋದರರಿಂದ ಸಿತಾರ್ ಜುಗಲ್‌ಬಂದಿ, ಸವಿತಾ ಗಣೇಶಪ್ರಸಾದ್ ಅವರಿಂದ ಜನಪದ ಗೀತೆಗಳು... ಅಬ್ಬಾ! ಒಂದೇ ಎರಡೇ... ಎಷ್ಟೆಲ್ಲ ಪ್ರತಿಭಾನ್ವಿತರು ನಮ್ಮ ಬೃಂದಾವನ ವೇದಿಕೆಯಲ್ಲಿ ಕಾಯಕ್ರಮಗಳನ್ನು ಕೊಟ್ಟರು! ಎರಡು ವರ್ಷಗಳಲ್ಲೂ ನಮಗೆ ಮನರಂಜನೆ ಮತ್ತು ಜ್ಞಾನದ ರಸದೌತಣ. 

ಇನ್ನೊಂದು ಅವಿಸ್ಮರಣೀಯ ಅನುಭವ ನಮ್ಮ ಸಂಭ್ರಮ ತಂಡಕ್ಕೆ ಆದದ್ದೆಂದರೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಕ್ಕೆ ಭೇಟಿ ಕೊಟ್ಟಾಗ ಸ್ವಾಗತಸಮಿತಿಯಲ್ಲಿ ಭಾಗಿಗಳಾದದ್ದು, ಮತ್ತು ಮೋದಿಯವರು ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಮಾಡಿದ ಅಭೂತಪೂರ್ವ ಭಾಷಣ ಕಾರ್ಯಕ್ರಮದಲ್ಲಿ ನಾವೆಲ್ಲ ಮುಂದಿನ ಸಾಲಿನಲ್ಲಿ ಪ್ರೇಕ್ಷಕರಾಗಿ ಕುಳಿತು ಮೋದಿಯವರ ಮಾಂತ್ರಿಕಚಮತ್ಕಾರದ ಆದರೆ ಹೃದಯಸ್ಪರ್ಶಿಯಾದ ಮಾತುಗಳಿಗೆ ಸಾಕ್ಷಿಯಾದದ್ದು. ಅಲ್ಲಿ ಸೇರಿದ್ದ ಎಲ್ಲ ೨೦೦೦೦ ಜನರೂ ಎದ್ದುನಿಂತು, ಮೋದಿಯವರೊಂದಿಗೆ ದನಿಗೂಡಿಸಿ ಭಾರತದ ರಾಷ್ಟ್ರಗೀತೆ ‘ಜನಗಣಮನ...’ ಹಾಡಿದ ಕ್ಷಣಗಳ ರೋಮಾಂಚನವನ್ನಂತೂ ನಾವೆಲ್ಲ ನಮ್ಮ ಜನ್ಮದಲ್ಲಿ ಮರೆಯಲಾರೆವು. ಇದಕ್ಕೆ ನಾನಂತೂ ಬೃಂದಾವನ ಕನ್ನಡಕೂಟಕ್ಕೆ ಚಿರ‌ಋಣಿಯಾಗಿರುತ್ತೇನೆ.

೨೦೧೪ರಲ್ಲಿ ಬೃಂದಾವನದ ದಶಮಾನೋತ್ಸವವನ್ನು ಆಚರಿಸುವುದಕ್ಕೆ ನಾವೆಲ್ಲ ಸಾಕಷ್ಟು ಮೊದಲೇ ಸಿದ್ಧತೆಯನ್ನು ಆರಂಭಿಸಿದೆವು. ನಮ್ಮ ಸಂಭ್ರಮ ತಂಡವಷ್ಟೇ ಅಲ್ಲದೆ ಕೂಟದ ಸ್ಥಾಪಕ ನಿರ್ದೇಶಕರು, ಮೊದಲ ಚುನಾಯಿತ ನಿರ್ದೇಶಕರು, ಸ್ಫೂರ್ತಿ ತಂಡ, ಮೈತ್ರಿ ತಂಡ- ಹೀಗೆ ಎಲ್ಲರೂ ಸೇರಿಕೊಂಡು ಚಾಲನೆ ನೀಡಿದೆವು. ದಶಮಾನೋತ್ಸವವನ್ನು ಸಾಕಷ್ಟು ವಿಜೃಂಭಣೆಯಿಂದಲೇ ನಡೆಸಬೇಕೆಂದು ನಿರ್ಧರಿಸಿದೆವು. ಕಾರ್ಯಕ್ರಮ ವಿಶಿಷ್ಟವೂ, ವಿಭಿನ್ನವೂ, ಅನನ್ಯವೂ ಆಗಿರಬೇಕೆಂದು ಮೊದಲಿಂದಲೂ ಒತ್ತು ನೀಡಿದೆವು. ಅದಕ್ಕೋಸ್ಕರ ಎರಡು ಮುಖ್ಯ ಯೋಜನೆಗಳನ್ನು ರೂಪಿಸಿದೆವು. ಯುವಸದಸ್ಯರ ಸಮ್ಮೇಳನ ನಡೆಸಿ ನಮ್ಮ ಬೃಂದಾವನ ಸದಸ್ಯರ ಮಕ್ಕಳನ್ನು ಮತ್ತು ಹತ್ತಿರದ ಕನ್ನಡಕೂಟಗಳ ಸದಸ್ಯರ ಮಕ್ಕಳನ್ನೂ ಒಂದೇಕಡೆ ಸೇರಿಸಿ ಅವರೆಲ್ಲ ಪರಸ್ಪರ ಪರಿಚಯವಾಗುವಂತೆ ಮಾಡುವುದು, ಟೀಮ್-ಬಿಲ್ಡಿಂಗ್ ಚಟುವಟಿಕೆಗಳನ್ನು ಮಾಡಿಸುವುದು, ಅವರ ಪ್ರತಿಭಾಪ್ರದರ್ಶನಕ್ಕೆ ಅವಕಾಶ ಕಲ್ಪಿಸುವುದು, ಆಮೂಲಕ ಕನ್ನಡ ಭಾಷೆ-ಸಂಸ್ಕೃತಿಯ ನಂಟನ್ನು ಅವರಲ್ಲಿ ಬಲಪಡಿಸುವುದು – ಇದು ನಮ್ಮ ಮೊದಲ ಯೋಜನೆ. ಇದರಲ್ಲಿ ನಾವು ನಿಜಕ್ಕೂ ಯಶಸ್ವಿಯಾದೆವು ಎಂದು ಹೆಮ್ಮೆಯಿಂದಲೇ ಹೇಳಬಹುದು.ನಮ್ಮ ಎರಡನೇ ಯೋಜನೆಯೆಂದರೆ, ನ್ಯೂಜೆರ್ಸಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ (ಅಂದರೆ ಅಮೆರಿಕ ಸಂಯುಕ್ತಸಂಸ್ಥಾನಗಳೊಳಗೆ) ವಾಸಿಸುವ ಕನ್ನಡಿಗರ ಪ್ರತಿಭೆಗಳನ್ನು ಬಳಸಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಇದೂ ಅಷ್ಟೇ- ನಮ್ಮ ಬೃಂದಾವನ ಸದಸ್ಯರು ಮತ್ತು ಹತ್ತಿರದ ನ್ಯೂಯಾರ್ಕ್, ಕನೆಕ್ಟಿಕಟ್ ಕನ್ನಡಕೂಟಗಳ ಸದಸ್ಯರು, ಹಾಗೆಯೇ ಬಾಸ್ಟನ್, ಡೆಟ್ರಾಯಿಟ್ ಪೆನ್ಸಿಲ್ವೇನಿಯಾ, ಸ್ಯಾನ್‌ಫ್ರಾನ್ಸಿಸ್ಕೊ ಮುಂತಾದೆಡೆಗಳಿಂದ ವಿವಿಧ ಪ್ರತಿಭೆಗಳ ಕನ್ನಡಿಗರು ಪಾಲ್ಗೊಂಡು ದಶಮಾನೋತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ರಸಧಾರೆ ಹರಿಸಿದ ರೀತಿ ನಮ್ಮ ಯೋಜನೆಗೆ ಇನ್ನಿಲ್ಲದ ಸಫಲತೆ ತಂದುಕೊಟ್ಟಿತು! ಬೃಂದಾವನದ ಇತಿಹಾಸದಲ್ಲೇ ಅದ್ವಿತೀಯ ಕಾರ್ಯಕ್ರಮ ಅದಾಗಿತ್ತು. ಸತತ ಹದಿನಾಲ್ಕು ಗಂಟೆಗಳವರೆಗೆ ಸ್ಟೇಜ್ ಮೇಲೆ ಒಂದಾದನಂತರ ಒಂದರಂತೆ ಕಾರ್ಯಕ್ರಮಗಳು ನಡೆಯುತ್ತಲೇ ಇದ್ದರೂ ಸಭಿಕರು ಇನ್ನೂ ಬೇಕು ಎನ್ನುತ್ತಲೇ ಇದ್ದರೆಂದರೆ ತಿಳಿದುಕೊಳ್ಳಬಹುದು. ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದವರೆಲ್ಲರೂ ಮನಸಾರೆ ತೊಡಗಿಸಿಕೊಂಡು ಅತ್ಯುತ್ತಮವಾಗಿ ಪ್ರದರ್ಶಿಸಿದ್ದರಿಂದ ಬೃಂದಾವನಿಗರೆಲ್ಲರ ಮನದಲ್ಲಿ ಬಹುಕಾಲ ನೆನಪಿರುವಂಥ ಉತ್ಸವಕ್ಕೆ ನಾವೆಲ್ಲ ಸಾಕ್ಷಿಯಾದೆವು. 

ಬೃಂದಾವನ ಕೂಟವನ್ನು ಆರಂಭಿಸಿದಾಗ ಅದು ನಮ್ಮದೊಂದು ಚಿಕ್ಕ ಮಗು ಎಂದೇ ನಾನು ಪರಿಗಣಿಸಿದ್ದೆ. ನಾವೊಂದಿಷ್ಟು ಸ್ನೇಹಿತರು ಸೇರಿ ಅದನ್ನು ಆರಂಭಿಸಿ ‘ಬೃಂದಾವನ’ ಎಂದು ಹೆಸರಿಟ್ಟದ್ದು, ಮಗುವಿನಂತೆಯೇ ಪಾಲನೆಪೋಷಣೆ ಮಾಡಿದ್ದು ಈಗಲೂ ನೆನಪಿದೆ. ಆಮೇಲೆ ಬೃಂದಾವನದಿಂದಾಗಿಯೇ ಸ್ಫೂರ್ತಿ ತಂಡದ ಮುಂದಾಳತ್ವ, ೬ನೇ ‘ಅಕ್ಕ’ ವಿಶ್ವಕನ್ನಡ ಸಮ್ಮೇಳನದ ಆತಿಥೇಯ ಕೂಟವಾಗಿ ಜವಾಬ್ದಾರಿ ನಮ್ಮ ಹೆಗಲಿಗೆ ಬಂದಾಗ ಎಷ್ಟೊಂದು ಕಲಿಕೆ, ಎಂತೆಂಥ ಅನುಭವಶಿಕ್ಷಣ ಇದರಲ್ಲಿದೆ ಎಂದು ನನಗೆ ಅರಿವಾದದ್ದು. ನಾಯಕತ್ವ ವಹಿಸುವುದು ಹೇಗೆ, ತಾಳ್ಮೆ ಸಂಯಮಗಳಿಂದ ವರ್ತಿಸುವುದು ಹೇಗೆ, ಬೇರೆಬೇರೆ ರೀತಿಯ/ಸ್ವಭಾವಗಳ ಜನರೊಡನೆ ಕೆಲಸಮಾಡಿ ಗುರಿ ತಲುಪುವುದು ಹೇಗೆ- ಮುಂತಾದವನ್ನೆಲ್ಲ ನಾನು ಬೃಂದಾವನದಿಂದಲೇ ಕಲಿತೆ; ಬೃಂದಾವನದಿಂದಾಗಿಯೇ ಕಲಿತೆ! ದಶಮಾನೋತ್ಸವವೂ ಈ ಕಲಿಕೆಯ ಇನ್ನೊಂದು ಸುಂದರ ಅಧ್ಯಾಯವೆಂದೇ ನನ್ನ ಅಭಿಪ್ರಾಯ. ಉತ್ತಮ ಫಲಿತಾಂಶಕ್ಕಾಗಿ ಸರಿಯಾಗಿ ಯೋಜನೆ ಮಾಡಿ, ಅದನ್ನು ಕಾರ್ಯಗತಗೊಳಿಸಿ, ಯಶಸ್ವಿಯಾದ ನನ್ನ ತಂಡದವರಿಂದಾಗಿ ಈ ಪ್ರಮುಖ ಮೈಲಿಗಲ್ಲನ್ನು ನಾವೆಲ್ಲ ಸೇರಿ ತಲುಪಿದೆವು. ಮಗು ಎಂದುಕೊಂಡಿದ್ದ ಬೃಂದಾವನ ನನಗೆ ಮಹಾಗುರು ಆಯಿತು. ಇದಕ್ಕಿಂತ ಬೇರೇನು ಧನ್ಯತೆ ಬೇಕು ಹೇಳಿ

 

ಉಷಾ ಪ್ರಸನ್ನಕುಮಾರ್

ಅಧ್ಯಕ್ಷರುಬೃಂದಾವನ ೨೦೧೩ - ೧೪ 

Copyright © Karnataka Cultural Organization - Brindavana ಬೃಂದಾವನ